ಮೈಸೂರು, ಸೆ.28: ಮೈಸೂರಿನಲ್ಲಿ ಸೋಮವಾರ ಜರುಗಿದ ದಸರಾ ಮಹೋತ್ಸವದ ಕಡೆಯ ಮತ್ತು ಆಕರ್ಷಣೀಯ ಕಾರ್ಯಕ್ರಮವಾದ ಜಂಬೂಸವಾರಿ ಮೆರವಣಿಗೆ ಸಂದರ್ಭದ ವಿಶೇಷಗಳು.
ರಾಜ್ಯ ಸೇರಿದಂತೆ ದೇಶಾದ್ಯಂತ ಈ ವರ್ಷ ಭಯೋತ್ಪಾದನಾ ಚಟುವಟಿಕೆಗಳು ಬಯಲುಗೊಂಡ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆಯ ಕೇಂದ್ರ ಸ್ಥಾನವಾದ ಮೈಸೂರು ಅರಮನೆಗೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಒಂದು ದಿನದ ಮಟ್ಟಿಗೆ ಅರಮನೆಯ ಭದ್ರತೆ ಉಸ್ತುವಾರಿಯನ್ನು ಕೇಂದ್ರ ಕೈಗಾರಿಕಾ ಮೀಸಲು ಪಡೆ ಪೊಲೀಸರು ವಹಿಸಲಾಗಿತ್ತು, ಅರಮನೆಯ ಎಲ್ಲ ದ್ವಾರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದ ಮೀಸಲು ಪಡೆ ಪೊಲೀಸರು ತೀವ್ರ ತಪಾಸಣೆಯ ನಂತರ ವಷ್ಟೇ ಪಾಸ್ ಹೊಂದಿದ್ದವರನ್ನು ಒಳಗಡೆ ಬಿಡುತ್ತಿದ್ದರು. ಸ್ಥಳೀಯ ಪೊಲೀಸರು ಇವರಿಗೆ ನೆರವಾದರು.
ಮೆರವಣಿಗೆ ಸಾಗಿದ ರಸ್ತೆಯ ಇಕ್ಕೆಲ್ಲಗಳಲ್ಲಿ ಕೂಡ ಕೇಂದ್ರ ಕೈಗಾರಿಕಾ ಮೀಸಲು ಪಡೆ ಹಾಗೂ ಸ್ಥಳೀಯ ಪೊಲೀಸರು ಅಪಾರ ಸಂಖ್ಯೆಯಲ್ಲಿ ಕರ್ತವ್ಯನಿರತರಾಗಿದ್ದು, ಬಂದೋಬಸ್ತ್‌ಗೆ ಸಂಬಂಧಿಸಿದಂತೆ ಹದ್ದಿನ ಕಣ್ಣಿಟ್ಟಿದ್ದರು.
ನವರಾತ್ರಿ ಉತ್ಸವದ ಆರಂಭದ ದಿನದಿಂದಲೂ ಅನೇಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಿದ್ದ ಮಳೆರಾಯ ಇಂದು ಕೃಪೆ ತೋರಿದನು. ಜಂಬೂಸವಾರಿ ಆರಂಭದಿಂದ ಅಂತ್ಯದವರೆಗೂ ಸೂರ್ಯ ಮತ್ತು ಮೋಡಗಳ ಕಣ್ಣಾಮುಚ್ಚಾಲೆ ಆಟ ಮುಂದು ವರಿದಿತ್ತು. ಆದರೆ ಯಾವ ಹಂತದಲ್ಲಿಯೂ ವರುಣನ ಕಾಡಲಿಲ್ಲ. ಒಂದೊಮ್ಮೆ ಬಿಸಿಲಿನ ಜಳವೇ ಹೆಚ್ಚಾಗಿ ನೆರೆದಿದ್ದ ಜನತೆ ಬೆವರಿನಲ್ಲಿ ಸ್ನಾನ ಮಾಡುವಂತಾಯಿತು.
ಅರಮನೆ, ವಿಧಾನಸೌಧದಿಂದ ಮೊದಲ್ಲೊಂಡು ಹಳ್ಳಿಯ ಗುಡಿಸಿಲಿನ ತನಕ ಈಗ ಪ್ರತಿ ಮನೆಯಲ್ಲೂ ಟಿವಿಗಳಿಗೇನೂ ಕೊರತೆಯಿಲ್ಲ. ಅಂತೆಯೇ ವಿವಿಧ ಚಾನೆಲ್‌ಗಳಲ್ಲಿ ಜಂಬೂಸವಾರಿಯ ನೇರ ಪ್ರಸಾರವಿದ್ದಾಗ್ಯೂ ಜನತೆ ಮೆರವಣಿಗೆಯನ್ನು ಹತ್ತಿರದಿಂದ ನೈಜತೆಯಿಂದ ನೋಡಲು ಕಾತರಿಸಿದ್ದು ಸಾಬೀತಾಯಿತು. ಜಂಬೂಸವಾರಿ ಸಾಗಿದ್ದ ರಸ್ತೆಯ ಇಕ್ಕೆಲ್ಲಗಳಲ್ಲಿ ನೆರೆದಿದ್ದ ಜನತೆಯೇ ಇದಕ್ಕೆ ಸಾಕ್ಷಿ. ಮಹಿಳೆಯರು, ಮಕ್ಕಳು ಎಂಬ ಭೇದಭಾವವಿಲ್ಲದೆ, ಲಕ್ಷಾಂತರ ಜನರು ತುದಿಗಾಲಿನಲ್ಲಿ ನಿಂತು ಮೆರವಣಿಗೆಯನ್ನು ಕ್ಷಿಸಿದರು. ಇದಕ್ಕಾಗಿ ಕೆಲವರು ಕಟ್ಟಡಗಳು, ಮರಗಳು, ಜಾಹೀರಾತು ಫಲಕಗಳನ್ನೇರಿದ್ದು ಕಂಡುಬಂತು.
ಪ್ರತಿ ವರ್ಷ ಹೊಸ ಕಾರ್ಯಕ್ರಮ: ಮುಖ್ಯಮಂತ್ರಿ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೈಭವ ವೃದ್ಧಿಯಾಗುವಂತೆ ಮಾಡಲು ಸರಕಾರ ಪ್ರತಿ ವರ್ಷ ಹೊಸ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಂದಿ ಧ್ವಜಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಸೋಮವಾರ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ದಸರಾವನ್ನು ಹೆಚ್ಚು ಹೆಚ್ಚು ಅಕರ್ಷಣೆಗೊಳಿಸಲು ಸರಕಾರ ಪ್ರಯತ್ನಿಸಲಿದೆ ಎಂದರು.
ಸರಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸತತ ಹಾಗೂ ಪ್ರಾಮಾಣಿಕ ಪರಿಶ್ರಮದಿಂದಾಗಿ ಈ ವರ್ಷ ದಸರಾ ಮಹೋತ್ಸವ ನಿರ್ಮಿಘ್ನವಾಗಿ ಮತ್ತು ಜನಾಕರ್ಷಣೀಯವಾಗಿ ನೆರವೇರಿದೆ. ಆದ್ದರಿಂದ ಹೆಚ್ಚು ಪ್ರವಾಸಿಗರು ಮೈಸೂರಿಗೆ ಆಗಮಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಗಳಾಗಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ದೇವರ ಆಶೀರ್ವಾದದಿಂದಾಗಿ ರಾಜ್ಯಾದ್ಯಂತ ಮಳೆ, ಬೆಳೆ ಸುಭಿಕ್ಷವಾಗಿದ್ದು, ಎಲ್ಲ ಜಲಾಶಯಗಳೂ ಭರ್ತಿಯಾಗಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ದರಸಾ ಮೆರವಣಿಗೆ ನೂಕು-ನುಗ್ಗಲು: ಲಘು ಲಾಠಿ ಪ್ರಹಾರ
ವಿಶ್ವವಿಖ್ಯಾತ ದಸರಾ ಮೆರವಣಿಗೆ ಹೊರಡುವಾಗ ಸಹಸ್ರಾರು ಮಂದಿ ಜಮಾಯಿಸಿದ್ದ ವೇಳೆ ನೂಕು-ನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಸೋಮವಾರ ನಡೆಯಿತು.
ಮೈಸೂರು: ಕೆ.ಆರ್. ವೃತ್ತಕ್ಕೆ ಮೆರವಣಿಗೆ ಆಗಮಿಸುತ್ತಿದ್ದಂತೆ ಜನರು ಕೂಗಿಕೊಂಡು ಮುಂದೆ ಬರಲು ಯತ್ನಿಸಿದರು. ಇದರಿಂದ ನೂಕಾಟವಾದ್ದರಿಂದ ಪೊಲೀಸರು ಜನರನ್ನು ಹಿಂದೆ ಸರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾದವು. ಅಲ್ಲದೇ ನೂಕಾಟದಿಂದ ಮಹಿಳೆಯರು ಮತ್ತು ಮಕ್ಕಳು ಕೆಳಕ್ಕೆ ಬಿದ್ದಿದ್ದರಿಂದ ಅವರನ್ನು ಸಮಾಧಾನಪಡಿಸಿ ಬಳಿಕ ರಸ್ತೆ ಬದಿಯಲ್ಲೇ ಕುಳಿತುಕೊಳ್ಳಲು ಸ್ಥಳಾವಕಾಶ ಕಲ್ಪಿಸಲಾಯಿತು.
ಆಯುರ್ವೇದಿಕ್ ವೃತ್ತದಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತಿದ್ದ ಬಲರಾಮ ಆನೆ ಬರುತ್ತಿದ್ದಂತೆ ನೆರೆದಿದ್ದವರು ಕೂಗಾಡಿ, ತಳ್ಳಾಡಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ರುಚಿ ತೋರಿಸಿದರು. ಮೆರವಣಿಗೆ ಮುಂದೆ ಹೋದ ಬಳಿಕ ಸಹಸ್ರಾರು ಮಂದಿ ಒಮ್ಮೆಲೆ ರಸ್ತೆಗಿಳಿದರು. ಸಾವಿರಾರು ಮಂದಿ ಗುಂಪಿನಲ್ಲಿ ತೆರಳು ವಾಗ ಕಿಡಿಗೇಡಿ ಯುವಕರು ಯುವತಿಯರನ್ನು ಚುಡಾಯಿಸಿ, ಗೇಲಿ ಮಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು.
ಭದ್ರತೆ ಹಿನ್ನೆಲೆಯಲ್ಲಿ ಪ್ರಮುಖ ವೃತ್ತಗಳ ಫುಟ್ಪಾತ್‌ಗಳ ಬದಿಯಲ್ಲಿ ಕಟ್ಟಲಾಗಿದ್ದ ಬಂಬುಗಳಿಗೆ ಜಾಲರಿಯನ್ನು ಇದೇ ಮೊದಲ ಬಾರಿಗೆ ಹಾಕುವ ಮೂಲಕ ಸಾರ್ವಜನಿಕರು ರಸ್ತೆಯತ್ತ ನುಗ್ಗದಂತೆ ನೋಡಿಕೊಳ್ಳಲಾಯಿತು. ಆದರೆ ಮೆರವಣಿಗೆ ಬಳಿಕ ಗುಂಪಾಗಿ ಹೊರಟ ಜನರು ಸ್ಥಳದಲ್ಲೇ ಇದ್ದ ಪೊಲೀಸರನ್ನು ಲೆಕ್ಕಿಸದೇ ಬಂಬುಗಳನ್ನು ಪಕ್ಕಕ್ಕೆ ಕಿತ್ತೆಸೆದರು.
ಪಾಸ್ ಇಲ್ಲದ ಕೆಲವರು ಮರಗಳನ್ನು ಏರಿ ಮೆರವಣಿಗೆ ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೊಡ್ಡ ದೊಡ್ಡ ಮರಗಳನ್ನೇ ಕೆಲವರು ಏರಿದರೆ, ಮತ್ತೆ ಕೆಲ ಯುವಕರು ಪ್ರಾಣದ ಹಂಗನ್ನೂ ತೊರೆದು ಹೋರ್ಡಿಂಗ್ಸ್‌ಗಳ ಮೇಲೆ ನಿಂತು ನೋಡುತ್ತಿದ್ದರು. ಕೆಲವರು ಮರ ಏರುವಾಗಲೇ ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡರು. ಬಹುತೇಕ ಕಟ್ಟಡಗಳ ಮೇಲೆ ಜನ ಭರ್ತಿಯಾಗಿ ತುಂಬಿದ್ದರು.
ಕುದುರೆ ಏರಿದ ಕಮಿಷನರ್: ದಸರಾ ಮೆರವಣಿಗೆಯಲ್ಲಿ ಪ್ರತಿ ವರ್ಷ ನಗರದ ಪ್ರಥಮ ಪ್ರಜೆ ಮೇಯರ್ ಆದವರು ಕುದುರೆ ಏರಿ ಬನ್ನಿಮಂಟಪದವರೆಗೂ ಹೋಗುವುದು ಸಂಪ್ರದಾಯ. ಆದರೆ ಇದೇ ಮೊದಲ ಬಾರಿಗೆ ನಗರ ಪೊಲೀಸ್ ಕಮಿಷನರ್ ಸುನಿಲ್ ಅಗರವಾಲ್ ಅವರು ಮೇಯರ್ ಪುರುಷೋತ್ತಮ್ ಅವರು ಸಾಗುತ್ತಿದ್ದ ಹಿಂದಿನ ಸಾಲಿನಲ್ಲಿ ಕುದುರೆ ಏರಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಹೊಸ ಸಂಪ್ರದಾಯ ಹುಟ್ಟುಹಾಕಿದರು. ಬನ್ನಿಮಂಟಪದವರೆಗೂ ಕಮಿಷನರ್ ಕುದುರೆ ಏರಿದ್ದು ವಿಶೇಷ ವಾಗಿತ್ತು.
ಬೆಚ್ಚಿದ ಕುದುರೆಗಳು: ಮೆರವಣಿಗೆಯಲ್ಲಿ ಸಾಗುತ್ತಿದ್ದ ಅಶ್ವಾರೋಹಿ ದಳದ ಕುದುರೆ ಸಾಲಿನಲ್ಲಿ ಒಂದೆರಡು ಕುದುರೆಗಳು ಜನರ ಚೀರಾಟಕ್ಕೆ ಬೆಚ್ಚಿ ಅತ್ತಿತ್ತ ಸಾಗಿದವು. ಇದರಿಂದ ಬೆಚ್ಚಿದ್ದ ಕುದುರೆಗಳನ್ನು ಅಶ್ವಾರೋಹಿ ಪಡೆಯ ಪೇದೆಗಳು ನಿಯಂತ್ರಣಕ್ಕೆ ತರುವಲ್ಲಿ ಹೆಣಗಾಡಿದರು.
ನಗಾರಿ ಬಾರಿಸಿದ ಸಂಚಾರ ಪೊಲೀಸ್: ಮೆರವಣಿಗೆಯಲ್ಲಿ ಸಾಗುತ್ತಿದ್ದ ವೀರಭದ್ರ ಕುಣಿತ ತಂಡದವರಿಂದ ನಗಾರಿಯನ್ನು ಕೇಳಿ ಪಡೆದ ಬೆಂಗಳೂರಿನ ಬಸವನಗುಡಿ ಸಂಚಾರ ಪೊಲೀಸ್ ಠಾಣೆಯ ಪೇದೆ ಜಿ.ಎಸ್.ಶಾಂತವೀರಣ್ಣ ಕೆ.ಆರ್.ವೃತ್ತದಲ್ಲಿ ಅದನ್ನು ಬಾರಿಸುವ ಮೂಲಕ ನೆರೆದಿದ್ದ ಜನರಿಂದ ಚಪ್ಪಾಳೆ ಗಿಟ್ಟಿಸಿದರು. ಆದರೆ ಕರ್ತವ್ಯ ಮಾಡುವುದನ್ನು ಬಿಟ್ಟು ನಗಾರಿ ಬಾರಿಸುತ್ತಿದ್ದ ಪೇದೆಯನ್ನು ಗಮನಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರನ್ನು ತರಾಟೆಗೆ ತೆಗೆದುಕೊಂಡರು.
ಮಾವುತ ಬಲಿ
ಅರಮನೆ ಆವರಣದಲ್ಲಿ ಆನೆ ದಾಳಿಗೆ ಮಾವುತ ಬಲಿಯಾಗಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಮೈಸೂರು: ಮಾವುತ ಅಹಮದ್ ಷರೀಫ್ (35) ಮೃತಪಟ್ಟ ವ್ಯಕ್ತಿ. ದಸರಾ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ 7.30ರ ಸುಮಾರಿನಲ್ಲಿ ಅರಮನೆಗೆ ಸೇರಿದ ಹೆಣ್ಣಾನೆ ಇಂದ್ರಾಳಿಗೆ ಮೈಮೇಲೆ ಚಿತ್ರಗಳನ್ನು ಬಿಡಿಸಿ ಶೃಂಗರಿಸುವಲ್ಲಿ ನಿರತನಾಗಿದ್ದ ಅಹಮದ್ ಷರೀಫ್ ಮೇಲೆ ಆನೆ ಇದ್ದಕ್ಕಿದ್ದಂತೆ ರೊಚ್ಚಿಗೆದ್ದು ದಾಳಿ ನಡೆಸಿತು.
ಸೊಂಡಿಲಿನಿಂದ ಪಕ್ಕಕ್ಕೆ ಒಗೆದಾಗ ಆತ ಸ್ಥಳದಲ್ಲೇ ಕುಸಿದು ಬಿದ್ದ. ಕೂಡಲೇ ಸಮೀಪದಲ್ಲಿದ್ದ ಇತರೆ ಮಾವುತರು ಆತನನ್ನು ಪಾರು ಮಾಡಿದರು. ಬಳಿಕ ಷರೀಫ್‌ನನ್ನು ಬಿ.ಎಂ. ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂಜೆ 4.30ರಲ್ಲಿ ಷರೀಫ್ ಕೊನೆಯುಸಿರೆಳೆದ.